ರಾಷ್ಟ್ರಗೀತೆ
ಪ್ರತಿಯೊಂದು ಸ್ವತಂತ್ರರಾಷ್ಟ್ರವೂ ತನ್ನ ರಾಷ್ಟ್ರಕ್ಕೆ ಯುಕ್ತ ಎನಿಸುವ ಸಂವಿಧಾನವನ್ನು ರೂಪಿಸಿಕೊಂಡು, ಅದರ ಅನ್ವಯ ತನ್ನ ಸಾಮಾಜಿಕ ಸಾಂಸ್ಕøತಿಕ, ರಾಜಕೀಯ ಮೊದಲಾದ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಅವುಗಳ ಮೌಲ್ಯಗಳನ್ನು ಸ್ಥೂಲವಾಗಿ ಪ್ರತಿಬಿಂಬಿಸುವ ಸಂವಿಧಾನ ಬದ್ಧವಾದ ಕೇಂದ್ರ ಸರ್ಕಾರದ ಅಂಗೀಕಾರ ಪಡೆದ ದೇಶಭಕ್ತಿಗೀತೆ (ನ್ಯಾಷನ್‍ಲ್ ಅಂಥಮ್). ಇದನ್ನು ಹಾಡುಗಾರಿಕೆಯ ಮೂಲಕವಾಗಿ ಆಗಲಿ ವಾದ್ಯಸಂಗೀತದ ಮೂಲಕವಾಗಿ ಆಗಲಿ ಅಭಿವ್ಯಕ್ತಪಡಿಸುವಾಗ ಆಯಾ ರಾಷ್ಟ್ರದ ಜನತೆ ಎದ್ದು ನಿಂತುಕೊಂಡು ತಮ್ಮ ಗೌರವವನ್ನು ಸೂಚಿಸುವ ಪರಿಪಾಠ ನಡೆದುಕೊಂಡು ಬಂದಿದೆ. ದೇಶದ ಅತಿ ಮಹತ್ತ್ವದ ಸಂದರ್ಭಗಳಲ್ಲಿ ಮತ್ತು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ತಪ್ಪದೇ ಹೇಳುವ ಗೀತೆ ಇದು. ಚರಿತ್ರೆಯ ಮಹತ್ತ್ವದ ಘಟನೆಗಳನ್ನು ದೇಶದ ಚೆಲುವು, ವೈಭವ, ತಾಯ್ನಾಡಪ್ರೇಮ, ನಿಷ್ಠೆ, ಔನ್ನತ್ಯ ಇವೆಲ್ಲವನ್ನು ಇದು ಒಳಗೊಂಡಿರುತ್ತದೆ. ಜನರಲ್ಲಿ ರಾಷ್ಟ್ರೀಯತೆ, ದೇಶಭಕ್ತಿ ಹಾಗೂ ಭಾವೈಕ್ಯವನ್ನು ಮೂಡಿಸುತ್ತದೆ. ರಾಷ್ಟ್ರದ ಆದರ್ಶ, ವ್ಯಕ್ತಿ ದೇಶಕ್ಕೆ ತೋರಬೇಕಾದ ನಿಷ್ಠೆಯನ್ನು ಸಾರುತ್ತದೆ. ಕೆಲವು ರಾಷ್ಟ್ರಗೀತೆಗಳು ರಾಷ್ಟ್ರ ಸಾಧಿಸಬಯಸುವ ಸಾಧನೆಗಳನ್ನು ವಸ್ತುವಾಗಿಸಿಕೊಂಡಿವೆ.

ರಾಷ್ಟ್ರಗೀತೆಯ ಕಲ್ಪನೆ ಲಂಡನ್ನಿನ ನಾಟಕ ಶಾಲೆಯೊಂದರಲ್ಲಿ 1745ರಲ್ಲಿ ಉಗಮವಾಯಿತು. ಇಂಗ್ಲೆಂಡಿನ ದೊರೆ ಎರಡನೆಯ ಜಾರ್ಜ್‍ನಿಂದ ಅರಸನಪಟ್ಟವನ್ನು ಕಸಿದುಕೊಳ್ಳಲು ಸ್ಟ್ಯೂಆರ್ಟ್ ರಾಜವಂಶದವನೊಬ್ಬ ದಾಳಿ ನಡೆಸಿದ. ಒಂದಾದ ಮೇಲೆ ಒಂದು ಪ್ರದೇಶವನ್ನು ವಶಪಡಿಸಿಕೊಳ್ಳತೊಡಗಿದ. ಈ ಸಮಯದಲ್ಲಿ ಡ್ರೂರಿಲೇನ್ ಥಿಯೇಟರಿನ ಸಂಗೀತ ನಿರ್ದೇಶಕನಾದ ತಾಮಸ್ ಆರ್ನೆ ಅರಸನ ಮೇಲೆ ತನಗಿದ್ದ ಪ್ರೀತಿ ವಿಶ್ವಾಸವನ್ನು ಒಂದು ಹಾಡಿನ ಮೂಲಕ ವ್ಯಕ್ತ ಪಡಿಸಿದ - `ದೇವರೇ ನಮ್ಮಯ ದೊರೆಯನ್ನು ಹರಸು, ಉದಾತ್ತನಾಗಿಹ ಜಾರ್ಚ್ ದೊರೆಯನ್ನು ಉಳಿಸು ಎಂಬುದು ಈ ಗೀತೆಯ ಭಾವಾರ್ಥ. ಇದನ್ನು ಡ್ರೂರಿಲೇನ್ ಥಿಯೇಟರಿನಲ್ಲಿ ನಡೆಯುತ್ತಿದ್ದ ಪ್ರತಿಯೊಂದು ನಾಟಕದ ಕೊನೆಯಲ್ಲೂ ಹಾಡುತ್ತಿದ್ದರು. ಜನ ಅದನ್ನು ಕೇಳಿ ಉತ್ಸಾಹದಿಂದ ಸ್ವಾಗತಿಸುತ್ತಿದ್ದರು. ಅನಂತರ ಬೇರೆ ನಾಟಕ ಕಂಪನಿಗಳು ಜನಪ್ರಿಯತೆಗಾಗಿ ಈ ಪದ್ಧತಿಯನ್ನು ಅನುಸರಿಸಿದವು. ಪತ್ರಿಕೆಗಳಲ್ಲಿ ಈ ಹಾಡು ಪ್ರಕಟಗೊಂಡಿತು. ರಾಜನ ಭಕ್ತರು ಇದನ್ನು ಸಮಾರಂಭಗಳು ನಡೆಯುತ್ತಿದ್ದ ಎಲ್ಲ ಕಡೆಗಳಲ್ಲೂ ಹಾಡತೊಡಗಿದರು. ಕಾಲಕಳೆದಂತೆ ಯಾವುದೇ ನಾಟಕ, ಸಂಗೀತ, ಸಮಾರಂಭಗಳು ಈ ಗೀತೆಯಿಲ್ಲದೆ ಕೊನೆಗೊಳ್ಳುತ್ತಿರಲಿಲ್ಲ. ಈ ಗೀತೆ ಹೆಚ್ಚು ಪ್ರಚಾರಕ್ಕೆ ಬಂದ ಬಳಿಕ ರಾಷ್ಟ್ರಗೀತೆಯಾಗಿ ಅಂಗೀಕಾರ ಪಡೆಯಿತು. ಕಾಲಕಾಲಕ್ಕೆ ಇದರಲ್ಲಿನ ಸಾಹಿತ್ಯ ಸಂದರ್ಭೋಚಿತವಾಗಿ ಬದಲಾಯಿತು. ಆಸ್ಟ್ರಿಯದ ರಾಷ್ಟ್ರಗೀತೆಯನ್ನು ಕೇಳಿ ಮೆಚ್ಚಿಕೊಂಡು ತನ್ನ ದೇಶಕ್ಕೂ ಇಂಥ ಗೀತೆಯೊಂದು ಇದ್ದರೆ ಚೆನ್ನು ಅಂದುಕೊಂಡನಂತೆ. ಇದಕ್ಕಾಗಿ 1797ರಲ್ಲಿ ಆಸ್ಟ್ರಿಯದ ರಾಷ್ಟ್ರಗೀತೆಯನ್ನು ರೂಪಿಸಿದ. ಹೇಡನ್ ರಚಿಸಿದ ಸಂಗೀತವನ್ನು ಆಧರಿಸಿ ಜರ್ಮನಿಯೂ ತನ್ನ ದೇಶಕ್ಕಾಗಿ ಒಂದು ರಾಷ್ಟ್ರಗೀತೆ ಸಿದ್ಧಗೊಳಿಸಿತು. ಜರ್ಮನಿ ಮತ್ತು ಆಸ್ಟ್ರಿಯಗಳ ಸೇನೆಗಳನ್ನು ಎದುರಿಸಿ ಹೋರಾಡುತ್ತಿದ್ದ ಫ್ರೆಂಚ್ ಸೇನಾಧಿಕಾರಿ ಈ ದೇಶಗಳ ರಾಷ್ಟ್ರಗೀತೆಗಳಿಂದ ಸ್ಫೂರ್ತಿಗೊಂಡು ರಚಿಸಿದ ಸಮರಗೀತೆಯೇ ಫ್ರಾನ್ಸ್‍ನ ರಾಷ್ಟ್ರಗೀತೆಯಾಗಿದೆ.

ಇಂಗ್ಲೆಂಡ್ ಅಮೆರಿಕಗಳ ನಡುವೆ 1812-14ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಅಮೆರಿಕದ ರಾಷ್ಟ್ರಗೀತೆ ರಚನೆಗೊಂಡಿತು. ಇಂಗ್ಲೆಂಡಿನ ನೌಕಾಬಲ ಬಾಲ್ಟಿಮೋರ್ ಬಂದರಿನ ಮೇಲೆ ದಾಳಿ ನಡೆಸಿತು. ನಗರದ ರಕ್ಷಣೆಗಾಗಿ ಮ್ಯಾಕ್ ಹೆನ್ರಿಕೋಟೆಯಲ್ಲಿದ್ದ ಅಮೆರಿಕನ್ ಸೈನಿಕರು ವೀರಾವೇಶದಿಂದ ಹೋರಾಟ ನಡೆಸುತ್ತಿದ್ದರು. ಬಾಲ್ಟಿಮೋರಿನ್ ಫ್ರಾನ್ಸಿಸ್ ಸ್ಕಾಟ್ ಕೀ ಎಂಬ ವಕೀಲ ಸೆರೆಯಾಗಿದ್ದ ತನ್ನ ಗೆಳೆಯನನ್ನು ಬಿಡಿಸಿಕೊಳ್ಳಲು ಇಂಗ್ಲಿಷ್ ಯುದ್ಧನೌಕಾಧಿಕಾರಿಯನ್ನು ಭೇಟಿಮಾಡಲು ಮಿತ್ರನೊಂದಿಗೆ ದೋಣಿಯಲ್ಲಿ ಹೊರಟ. ಇವರು ಯುದ್ಧನೌಕೆಯನ್ನು ಸೇರುವುದಕ್ಕೆ ಸರಿಯಾಗಿ ಭಾರಿ ಫಿರಂಗಿ ಹೋರಾಟ ಪ್ರಾರಂಭವಾಯಿತು. ರಾತ್ರಿಯಾದರೂ ಯುದ್ಧ ನಿಲ್ಲಲಿಲ್ಲ. ಹೀಗಾಗಿ ಇವರು ರಾತ್ರಿ ಇಡೀ ದೋಣಿಯಲ್ಲಿಯೇ ಕಳೆಯುವಂತೆ ಆಯಿತು. ಬೆಳಕು ಮೂಡುತ್ತಲೇ ಕಣ್ಣು ತೆರೆದು ಕೋಟೆಯತ್ತ ನೋಡಿದಾಗ ಅಮೆರಿಕ ಬಾವುಟ ಮ್ಯಾಕ್ ಹೆನ್ರಿಯಕೋಟೆಯ ಮೇಲೆ ಹಾರಾಡುತ್ತಿತ್ತು. ಈ ಆನಂದದ ಕ್ಷಣದಲ್ಲಿ ಕೀ ಅಲ್ಲಿಯೇ ಬಿದ್ದಿದ್ದ ಒಂದು ಲಕೋಟೆಯ ಮೇಲೆ ದಿ ಸ್ಟ್ರಾರ್ ಸ್ಲ್ಯಾಂಗಲ್ಡ್ ಬ್ಯಾನರ್ ಎಂಬ ಪದ್ಯವನ್ನು ಬರೆದ (1814). ಒಂದು ಶತಮಾನಕ್ಕೂ ಹೆಚ್ಚುಕಾಲದ ಅನಂತರ 1931ರಲ್ಲಿ ಇದು ಅಮೆರಿಕದ ಅಧಿಕೃತ ರಾಷ್ಟ್ರಗೀತೆಯಾಗಿ ಅಂಗೀಕಾರ ಪಡೆಯಿತು. ಇಂಗ್ಲೆಂಡಿನ ಒಂದು ಪಡಖಾನೆಹಾಡಿನ ಸಂಗೀತದ ಧಾಟಿ ಈ ಗೀತೆಗೆ ಆಳವಡಿಸಿದೆ.

ಕೆನಡಕ್ಕೆ ಅಧಿಕೃತವಾದ ರಾಷ್ಟ್ರಗೀತೆ ಇಲ್ಲ. ಗಾಡ್ ಸೇವ್ ದಿ ಕ್ವೀನ್ ಆರ್ ಕಿಂಗ್ (ಓ ದೇವರೆ ರಾಣಿಯನ್ನು ಅಥವಾ ರಾಜನನ್ನು ರಕ್ಷಿಸು) ಎಂಬ ವಾಣಿಯೇ ರಾಷ್ಟ್ರಗೀತೆಯ ಸ್ಥಾನದಲ್ಲಿ ಬಳಕೆಯಾಗುತ್ತಿದೆ. ಇದಲ್ಲದೆ ಓ ಕೆನಡ ಎಂಬ ಗೀತೆಯನ್ನೂ ರಾಷ್ಟ್ರಗೀತೆಯಾಗಿ ಬಳಸುವರು.

ಸಾಮಾನ್ಯವಾಗಿ ರಾಷ್ಟ್ರಗೀತೆಯಲ್ಲಿ ರಾಷ್ಟ್ರೀಯ ಭಾವನೆಗಳದೇ ಮೇಲುಗೈ. ಆದರೆ ಲಕ್ಸೆಂಬರ್ಗ್‍ನ ರಾಷ್ಟ್ರಗೀತೆ ಇದಕ್ಕೆ ಅಪವಾದವೆನಿಸಿದೆ. ಈ ದೇಶದಲ್ಲಿ ರೈಲುಬಂಡಿಯನ್ನು ಮೊತ್ತಮೊದಲಿಗೆ ಓಡಿಸಿದ ಸಂದರ್ಭದಲ್ಲಿ ರಚಿತವಾದ (ಬೆಂಕಿಯ ಬಂಡಿ ಸಿದ್ಧವಾಗಿದೆ.) ಎಂಬ ಹಾಡೇ ರಾಷ್ಟ್ರಗೀತೆಯಾಗಿದೆ. ರಾಷ್ಟ್ರಗೀತೆಯಲ್ಲಿ ದೇಶವನ್ನು ತಾಯ್ನಾಡು ಎಂದು ಸ್ತುತಿಸುವುದೇ ಹೆಚ್ಚು. ಆದರೆ ರೊಮೇನಿಯದ ರಾಷ್ಟ್ರಗೀತೆ ನಾವು ನಮ್ಮ ತಂದೆನಾಡಾದ ರೊಮೇನಿಯವನ್ನು ಹೊಗಳುತ್ತೇವೆ. (ವಿ ಪ್ರೈeóï ದಿ ಫಾದರ್‍ಲ್ಯಾಡ್ ರೊಮೇನಿಯ) ಎಂಬುದು ಅಲ್ಲಿನ ವೈಶಿಷ್ಟ್ಯ. 1971ರಲ್ಲಿ ಸ್ವಾತಂತ್ರ್ಯ ಪಡೆದ ಬಂಗ್ಲಾದೇಶ ರವೀಂದ್ರನಾಥ ಟಾಗೂರರ ಗೀತೆಯನ್ನು ರಾಷ್ಟ್ರಗೀತೆಯಾಗಿ ಸಂವಿಧಾನದಲ್ಲಿ ಅಂಗೀಕರಿಸಿದೆ. ನಸರ್ ಉಲ್ ಇಸ್ಲಾಂ ಅವರ ಹಾಡು ರಾಷ್ಟ್ರಸ್ತವವಾಗಿದೆ.
ಪಾಕಿಸ್ತಾನ 1947ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಿತು. ದೇಶಕ್ಕೆ ರಾಷ್ಟ್ರಗೀತೆಯನ್ನು ಆಯ್ಕೆ ಮಾಡಲು ಎರಡು ಪ್ರತ್ಯೇಕ ಬಹುಮಾನಗಳನ್ನು ಘೋಷಿಸಿತು. ಈಗ ಪ್ರಚಾರದಲ್ಲಿರುವ ರಾಷ್ಟ್ರಗೀತೆ 1954ರಲ್ಲಿ ಅಲ್ಲಿಯ ಸಂವಿಧಾನದಲ್ಲಿ ಅಂಗೀಕೃತವಾಯಿತು.

ಭಾರತದಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಆನಂದಮಠ ಕಾದಂಬರಿಯಲ್ಲಿನ ವಂದೇ ಮಾತರಂ ಗೀತೆ ಸ್ವಾತಂತ್ರ್ಯಪೂರ್ವದಲ್ಲಿ ರಾಷ್ಟ್ರಗೀತೆಯ ಸ್ಥಾನವನ್ನು ಪಡೆದುಕೊಂಡಿತು. ಇದನ್ನು ಅವರು 1875ರಲ್ಲಿ ರಚಿಸಿದರು. ಈ ಗೀತೆ ಮೊದಲಿಗೆ ಬಂಗಾರ್‍ದರ್ಶನ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಅನಂತರದಲ್ಲಿ ಈ ಗೀತೆಯನ್ನು ಬಂಕಿಮಚಂದ್ರರು ತಮ್ಮ ಕಾದಂಬರಿಯಲ್ಲಿ ಬಳಸಿದರು. ಇದು ಭರತಖಂಡದ ಚೆಲುವನ್ನೂ ತಾಯ್ನಾಡ ಪ್ರೇಮವನ್ನೂ ಅಭಿವ್ಯಕ್ತಿಸುತ್ತದೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅನೇಕ ಚಳುವಳಿಗಾರರು ವಂದೇ ಮಾತರಂ ಗೀತೆಯನ್ನು ಹಾಡುತ್ತಿದ್ದರು. ಇದನ್ನು ಕೇಳಿದರೆ ಸಾಕು ಬ್ರಿಟಿಷರು ಕೋಪಾವಿಷ್ಟರಾಗುತ್ತಿದ್ದರು. ಸ್ವಾತಂತ್ರ್ಯ ಚಳುವಳಿಗಾರರನ್ನು ದಯಾದಾಕ್ಷಿಣ್ಯಗಳಿಲ್ಲದೆ ಸದೆಬಡಿಯುತ್ತಿದ್ದರು. ಸಾವಿರಾರು ಜನರಲ್ಲಿ ದೇಶಭಕ್ತಿಯನ್ನು ಈ ಗೀತೆ ಉದ್ದೀಪನಗೊಳಿಸಿತು. ಅಹಿಂಸಾತತ್ತ್ವವನ್ನು ಪಾಲಿಸುತ್ತಿದ್ದ ಸ್ವಯಂಸೇವಕರು, ರಾಷ್ಟ್ರಪ್ರೇಮಕ್ಕಾಗಿ, ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣವಾಗಿಟ್ಟು ತಮ್ಮ ಕೊನೆಯ ಉಸಿರು ಇರುವ ತನಕ ವಂದೇ ಮಾತರಂ ಹಾಡಿದ್ದುಂಟು. ನಾಡಿನ ಜನರಲ್ಲಿ ಇದು ಕೇವಲ ಗೀತೆ ಮಾತ್ರ ಆಗಿರಲಿಲ್ಲ; ಬೆಂಕಿಯ ಜ್ವಾಲೆಯಾಗಿತ್ತು. ಸಮರ್ಪಣೆಯ ಮಂತ್ರವಾಗಿತ್ತು. ನಾಡಿಗೆ ಸ್ವಾತಂತ್ರ್ಯ ಬಂದ ನಂತರ ಈ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಅಂಗೀಕರಿಸಲು ಹಲವರು ಒಪ್ಪಲಿಲ್ಲ. ಸಂವಿಧಾನದಲ್ಲಿ ಇದು ರಾಷ್ಟ್ರಸ್ತವವಾಗಿ ಅಂಗೀಕೃತವಾಯಿತು. ರವೀಂದ್ರನಾಥ ಠಾಕೂರರ `ಜನಗಣಮನ ಅಧಿನಾಯಕ ಜಯಹೇ ಎಂಬುದು ಭಾರತದ ರಾಷ್ಟ್ರಗೀತೆಯಾಗಿ ಮಾನ್ಯತೆ ಪಡೆಯಿತು. (ನೋಡಿ- ಭಾರತದ-ರಾಷ್ಟ್ರಗೀತೆ)

ಕೆಲವೊಂದು ರಾಷ್ಟ್ರಗೀತೆಗಳ ಮೊದಲ ಸಾಲುಗಳು ಹೀಗಿವೆ :

 ರಾಷ್ಟ್ರಗಳು 	ರಾಷ್ಟ್ರಗೀತೆ
ಅಮೆರಿಕ ಸಂಯಕ್ತ ಸಂಸ್ಥಾನ	ದಿ ಸ್ಟಾರ್ ಸ್ಲ್ಯಾಂಗಲ್ಡ್ ಬ್ಯಾನರ್
ಆಲ್ಜೀರಿಯ 	ಐ ಪ್ರಾಮಿಸ್
ಆಸ್ಟ್ರಿಯ 	ಲ್ಯಾಂಡ್ ಆಫ್ ಮೌಂಟೆನ್ಸ್, ಲ್ಯಾಂಡ್ ಆಫ್ ರಿವರ್ಸ್
ಇಂಗ್ಲೆಂಡ್ 	ಗಾಡ್ ಸೇವ್ ದಿ ಕ್ವೀನ್ ಆರ್ ಕಿಂಗ್
ಇಂಡೋನೇಷ್ಯ	ಗ್ರೇಟರ್ ಇಂಡೋನೇಷ್ಯ
ಇಟಲಿ	ಹೈಮ್ ಆಫ್ ಮಮೇಲಿ
ಇರಾಕ್	ಸಲ್ಯೂಟ್ ಟು ದಿ ರಿಪಬ್ಲಿಕ್
ಇಸ್ರೇಲ್ 	ದಿ ಹೋಮ್
ಉತ್ತರ ವಿಯೆಟ್ನಾಂ	ಕಾಲ್ ಟು ಯೂತ್
ಉರುಗ್ವೆ	ನ್ಯಾಷನಲ್ ಹೈಮ್ ಆಫ್ ಉರುಗ್ವೆ
ಐರ್ಲೆಂಡ್	ದಿ ಸೋಲ್ಜರ್ಸ್ ಸಾಂಗ್
ಕಾಂಬೋಡಿಯ	ದಿ ಮಾರ್ಚ್ ಆಫ್ ದಿ ಕಮೆರ್ ರಿಪಬ್ಲಿಕ್
ಕೆನಡ	ಗಡ್ ಸೇವ್ ದಿ ಕ್ವೀನ್ ಆರ್ ಕಿಂಗ್
ಕೊಂಬಿಯ	ಇಲ್ ಹಿಂನೊ ನಾಸೀನಲ್
ಚೀನ 	ದಿ ಮಾರ್ಚ್ ಆಫ್ ದಿ ವಾಲೆಂಟರ್ಸ್
ಜಪಾನ್	ದಿ ರೂನ್ ಆಫ್ ಅವರ್ ಎಂಪರರ್
ಜರ್ಮನಿ	ಅರೈಸೆನ್ ಫ್ರಾಮ್ ರೂಯ್ನಿಸ್
ಜೆಕೊಸ್ಲೊವಾಕೀಯ	ವೇರ್ ಈಸ್ ಮೈ ಹೋಮ್‍ಲ್ಯಾಂಡ್
	ಲೈಟನಿಂಗ್ ಫ್ಲಾಷಸ್ ಓವರ್ ದಿ ಟಾಟಸ್
ಡೆನ್ಮಾರ್ಕ್ 	ವೇರ್ ಈಸ್ ಎ ಲೌವ್ಲಿ ಲ್ಯಾಂಡ್
ದಕ್ಷಿಣ ವಿಯೆಟ್ನಾಂ	ಫಾರ್ವಡ್ ಸೋಲ್ಜರ್ಸ್
ಥಾಯ್‍ಲ್ಯಾಂಡ್ 	ಪ್ಲೆಂಗ್ ಚಾರ್ಟ್
ನಾರ್ವೇ	ಎಸ್ ವಿ ಲವ್ ವಿಥ್ ಫಾಂಡ್ ಡಿವೋಷನ್
ನೆದರ್ಲೆಂಡ್	ವಿಲಿಯಂ ಆಫ್ ಮ್ಯಾಸೊಲ್
ನ್ಯೂಜಿûೀಲೆಂಡ್	ಗಾಡ್ ಸೇವ್ ದಿ ಕ್ವೀನ್
ಪಾಕಿಸ್ತಾನ್ 	ಕ್ಯೂಮಿತರಾನ
ಪೋಲೆಂಡ್ 	ಪೋಲೆಂಡ್ ಹ್ಯಾಸ್ ನಾಟ್ ಯಟ್ ಪೆರಿಷ್ಡ್
ಫಿನ್‍ಲೆಂಡ್	ಇನ್ ಫಿನ್ನಷ್ ಇನ್ ಸ್ವೀಡಿಸ್ ಅವರ್ ಲ್ಯಾಂಡ್
ಫಿಜಿ	ಗಾಡ್ ಸೇವ್ ದಿ ಕ್ವೀನ್
ಫ್ರಾನ್ಸ್ 	ಲ ಮರೆಸಿಲೈಸಿ
ಭಾರತ					   ಜನಗಣಮನ
ರೊಮೇನಿಯ	ವಿ ಪ್ರೈeóï ದಿ ಫಾದರ್ ಲ್ಯಾಂಡ್ ರೊಮೇನಿಯ
ವೆನಿಜ್ವೀಲ್ 	ಗ್ಲೋರಿ ಟು ದಿ ಬ್ರೇವ್ ಪೀಪಲ್
ಸಿಂಗಪುರ	ಫಾರ್ವರ್ಡ್ ಸಿಂಗಪುರ್
ದಕ್ಷಿಣ ಆಫ್ರಿಕಾ	ದಿ ಕಾಲ್ ಆಫ್ ಸೌತ್ ಆಫ್ರಿಕಾ
ಸ್ವೀಡನ್ 	ದಾವ್ ಏನ್ಷಯಂಟ್ ಡೌವ್ ಫ್ರೀ ಬಾರ್ನ್
ಸ್ವಿಟ್‍ಜರ್‍ಲೆಂಡ್	ಸ್ವಿಸ್ ಹೈಮ್
ಹಂಗರಿ	ಗಾಡ್ ಬ್ಲೆಸ್ ದಿ ಹಂಗರಿಯನ್ಸ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ